ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ರೈತರ ಬೆಳೆಯುವ ಬೆಳೆಗೆ ಬೆಂಬಲ ಬೆಲೆ ನೀಡಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ""
"ರಾಜ್ಯದ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಮಾಯವಾಗಿದ್ದಾರಾ?"
ಬೆಂಗಳೂರು: ಮೆಕ್ಕೆ ಜೋಳ, ಭತ್ತ, ಈರುಳ್ಳಿ ಖರೀದಿ ಕೇಂದ್ರಗಳನ್ನು ತೆರೆಯಬೇಕಾದ ರಾಜ್ಯದ ಕಾಂಗ್ರೆಸ್ ಸರಕಾರವು ವಿಧಾನಸೌಧದ ಮೂರನೇ ಮಹಡಿಯಲ್ಲಿ ಶಾಸಕರ ಖರೀದಿ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬ್ರೇಕ್ ಫಾಸ್ಟ್ ಸಭೆಯಲ್ಲಿ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಗಳು ರೈತರ ಸಮಸ್ಯೆ, ಕೇಂದ್ರ ಸರಕಾರ ನಿಗದಿ ಮಾಡಿದ ಕನಿಷ್ಠ ಬೆಂಬಲ ಬೆಲೆ ಕುರಿತು ಚರ್ಚೆ ಮಾಡಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷವು ನಾಡಿನ ಪ್ರಜ್ಞಾವಂತ ಮತದಾರರಿಗೆ ಅಪಮಾನ ಮಾಡಿದೆ ಎಂದು ದೂರಿದರು.
ನಾಟಿ ಕೋಳಿ ಸವಿದುದು, ತಟ್ಟೆ ಇಡ್ಲಿ ತಿಂದದ್ದು, ಯಾರು ಬಡಿಸಿದರೆಂಬುದೇ ವರ್ಣರಂಜಿತವಾಗಿ ರಾಷ್ಟ್ರ- ಅಂತರರಾಷ್ಟ್ರ ಮಟ್ಟದ ದೊಡ್ಡ ಸುದ್ದಿಯಾಗಿದೆ ಎಂದ ಅವರು, ರಾಜ್ಯದಲ್ಲಿ 30 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಜಾಸ್ತಿಯಾಗಿದೆ. ಇದರ ಬಗ್ಗೆ ಚರ್ಚೆ ಮಾಡಿದ್ದೀರಾ ಸಿದ್ದರಾಮಯ್ಯನವರೇ? ಕೃಷಿ ಸಚಿವರು, ತೋಟಗಾರಿಕೆ ಸಚಿವರು ಕಾಣದಂತೆ ಮಾಯವಾಗಿದ್ದಾರಾ ಎಂದು ಪ್ರಶ್ನಿಸಿದರು.
ಎಲ್ಲ ಜಿಲ್ಲಾ ಕೇಂದ್ರ, ಮಂಡಲಗಳಲ್ಲಿ ಬಿಜೆಪಿ ರೈತಪರ ಹೋರಾಟ ಮಾಡಿದೆ. ಕೇಂದ್ರ ಸರಕಾರ ಮೆಕ್ಕೆ ಜೋಳ ಖರೀದಿಗೆ 2,400 ರೂ. ನಿಗದಿ ಮಾಡಿದೆ. ರಾಜ್ಯ ಸರಕಾರವು ಹೆಚ್ಚುವರಿಯಾಗಿ 600 ರೂ. ಕೊಟ್ಟು 3 ಸಾವಿರ ರೂಪಾಯಿಗೆ ಖರೀದಿಸಬೇಕಿತ್ತು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ರೈತರು 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಇದರ ಕುರಿತು ಚರ್ಚಿಸಿದ್ದೀರಾ? ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೀರಾ? ಎಲ್ಲಿ ನಿಮ್ಮ ಕೃಷಿ ಸಚಿವರು? ಅವರು ನಾಪತ್ತೆ. ತೋಟಗಾರಿಕೆ ಬೆಳೆಗಳ ವಿಷಯವೂ ಚರ್ಚೆ ಆಗುತ್ತಿಲ್ಲ ಎಂದು ದೂರಿದರು.
ಚಾಕು, ಚೂರಿ, ಚೈನ್, ಮಚ್ಚು, ಲಾಂಗು ಹಿಡಿದು ಹೊಡೆದಾಡುವ ಸ್ಥಿತಿ..
ಸಿಎಂ- ಡಿಸಿಎಂ ಸಂಬಂಧಗಳೇ ಹಳಸಿ ಹೋಗಿದೆ. ಕಾಂಗ್ರೆಸ್ ಜಗಳ ಬೀದಿಗೆ ಬಂದು ನಿಂತಿದೆ. ಹಿಂದೆ ವೀರಪ್ಪ ಮೊಯಿಲಿ ಅವರು ಸಿಎಂ ಆಗಿದ್ದಾಗ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಪ್- ಸಾಸರ್ ಮೂಲಕ ಹೊಡೆದಾಡಿದ್ದರು. ಈಗ ಕಪ್ ಸಾಸರ್ ಸಂಸ್ಕøತಿ ಇಲ್ಲ; ನಿಮ್ಮಿಂದ ನಿಮ್ಮ ಕಾಂಗ್ರೆಸ್ಸಿನ ಶಾಸಕರಿಗೆ ಚಾಕು, ಚೂರಿ, ಚೈನ್, ಮಚ್ಚು, ಲಾಂಗು ಹಿಡಿದು ಹೊಡೆದಾಡುವ ಸ್ಥಿತಿ ಬಂದಿದೆ ಎಂದು ಎಂ.ಪಿ.ರೇಣುಕಾಚಾರ್ಯ ಅವರು ಟೀಕಿಸಿದರು.
ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಧಿಕಾರಿಗಳು ಮಾತು ಕೇಳುತ್ತಿಲ್ಲ. ಇವರು ಸಿಎಂ ಆಗಿರುತ್ತಾರೋ, ಅವರು ಆಗುತ್ತಾರೋ ಎಂಬ ಗೊಂದಲ ಅಧಿಕಾರಿಗಳದು ಎಂದು ವಿಶ್ಲೇಷಿಸಿದರು.
ರಾಜ್ಯ ಮಾಧ್ಯಮ ಸಮಿತಿ ಸಂಚಾಲಕ ಕರುಣಾಕರ ಖಾಸಲೆ, ಸದಸ್ಯ ಡಿ.ಟಿ.ವಿಜೇಂದ್ರ ಅವರು ಹಾಜರಿದ್ದರು.