ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಸಂವಿಧಾನದ 74ನೇ ತಿದ್ದುಪಡಿಯು ಸ್ಥಳೀಯ ಸಂಸ್ಥೆಗಳಿಗೆ ಭಗವದ್ಗೀತೆ ಇದ್ದಂತೆ. ಹೊಸ ಪಾಲಿಕೆಗೆ ಮೇಯರ್ ಸುಪ್ರೀಂ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಇದ್ದರೆ ಅವರೇ ಸುಪ್ರೀಂ. ಯೋಜನೆಗಳನ್ನು ಮುಖ್ಯಮಂತ್ರಿಯೇ ಅನುಮೋದಿಸುವ ಮನೆಹಾಳು ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಪಾಲಿಕೆ ಯಾಕೆ ಬೇಕು? ನೀವೇ ಪ್ಲಾನಿಂಗ್ ಅಥಾರಿಟಿ. ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಎಂಜಿನಿಯರನ್ನು ಸಿಇಒ ಮಾಡಿದ್ದಾರೆ. ಇವರೇ ಮುಂದೆ ಟೆಂಡರ್ ಮಾಡುತ್ತಾರೆ. ಮೆಟ್ರೊ, ಅಂಡರ್‍ಪಾಸ್ ಟನೆಲನ್ನೂ ಇವರೇ ಮಾಡಲಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿಯೇ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತಾರೆ. ಕೈಯಿಂದ ಜೇಬಿಗೆ ಇಟ್ಟುಕೊಳ್ಳುವ ಪದ್ಧತಿ ಇದೆಂದು ವ್ಯಂಗ್ಯವಾಡಿದರು. ಕೌನ್ಸಿಲ್ ಒಪ್ಪಿಗೆ ಸೂಚಿಸಿ ಮೇಯರ್ ಮೂಲಕ ಸರಕಾರಕ್ಕೆ ಕಳಿಸಬೇಕಿತ್ತು. ಇವರೇ ಅದನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಇದೇ ಸಭೆಯು ರಸ್ತೆ ಕಾಮಗಾರಿಯನ್ನೂ ಅನುಮೋದಿಸುತ್ತದೆ. ಅಂದಮೇಲೆ ಪಾಲಿಕೆ ನೆಗೆದುಬಿದ್ದು ಹೋದಂತೆ ಎಂದು ಆರೋಪಿಸಿದರು.
ಎಲ್ಲ ಪತ್ರಿಕೆಗಳಿಗೆ ಸರಕಾರದ ದುಡ್ಡಿನಲ್ಲಿ ಜಾಹೀರಾತು ಕೊಟ್ಟಿದ್ದಾರೆ. ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಿಗೆ ಕರೆಯುತ್ತಿಲ್ಲ ಎಂದು ಟೀಕಿಸಿದರು. ಇದು ಸಂವಿಧಾನದ ಉಲ್ಲಂಘನೆ ಎಂದು ದೂರಿದರು. ಎಲ್ಲ ಕ್ಷೇತ್ರದಲ್ಲೂ ಇದು ನಡೆದಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಭೆಯನ್ನು ಇವತ್ತು ರಾಜ್ಯ ಸರಕಾರ ಕರೆದಿದೆ. ಇದನ್ನು ಸರಕಾರ ಎನ್ನಬೇಕೇ ಎಂದು ಪ್ರಶ್ನಿಸಿದ ಅವರು, ಸರಕಾರ ಎಂದರೆ ಕಾನೂನು, ಸುವ್ಯವಸ್ಥೆ, ಸಂವಿಧಾನ ಎಲ್ಲ ಇರಬೇಕು. ಇವರು ನಿನ್ನೆ ಸಭೆ ಇರುವುದಾಗಿ ಫೋನ್ ಮಾಡಿದ್ದಾರೆ. ಮಧ್ಯಾಹ್ನ 12ಕ್ಕೆ ಕಾರ್ಯಸೂಚಿ ಮನೆಗೆ ಕಳಿಸಿ, ಸಂಜೆ 4ಕ್ಕೆ ಸಭೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಏನೇ ನೋಟಿಸ್ ಕೊಡುವುದಾದರೂ 7 ದಿನಗಳ ಮೊದಲು ಕೊಡಬೇಕಿತ್ತು. ಪ್ರಾಧಿಕಾರದ ಸಭೆಗೆ ನೀತಿ ನಿಯಮಗಳಿವೆ. ಬೇಕಾಬಿಟ್ಟಿ ಕೊಡಲು ಬರುವುದಿಲ್ಲ ಎಂದು ಟೀಕಿಸಿದರು. ನಾನು ಬೆಳಿಗ್ಗೆ ಕಾರ್ಯಕ್ರಮಕ್ಕೆಂದು ಮನೆಯಿಂದ ತೆರಳಿದ್ದೆ ಎಂದರು. ಇವರ ಯೋಗ್ಯತೆ ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಯಾವ ಪುರುಷಾರ್ಥಕ್ಕೆ ಈ ಸಭೆ...
ರಸ್ತೆಗಳ ಗುಂಡಿ ಮುಚ್ಚಿ ಓಡಾಟ ಸರಾಗವಾಗಿ ಆದರೆ, ಸಂಚಾರ ಸಮಸ್ಯೆ ಆಗುವುದು ಹೇಗೆ ಎಂದು ಆರ್.ಅಶೋಕ್ ಅವರು ಪ್ರಶ್ನಿಸಿದರು.
ಗುಂಡಿಗಳು ಬಿದ್ದದ್ದೇ ಅಭಿವೃದ್ಧಿ ಎನ್ನುವುದಾದರೆ, ಅದನ್ನೂ ಹೇಳಿ ಬಿಡಿ ಎಂದು ಸವಾಲು ಹಾಕಿದರು. ಲಕ್ಷಾಂತರ ಬಸ್, ವಾಹನ ಓಡಾಡುವ ವರ್ತುಲ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ ಎಂದು ಗಮನ ಸೆಳೆದರು. ಯಾವ ಪುರುಷಾರ್ಥಕ್ಕೆ ಈ ಜಿಬಿಎ ಸಭೆ ಎಂದು ಪ್ರಶ್ನಿಸಿದರು.
ಎರಡೂವರೆ ವರ್ಷಗಳಲ್ಲಿ ಅನುದಾನ ಕೊಟ್ಟಿಲ್ಲ; 25 ಕೋಟಿ ಎಂದು ಹೇಳಿ 3 ತಿಂಗಳಾಗಿದೆ. ಬೆಂಗಳೂರಿಗೆ ಭರಪೂರ ಅಭಿವೃದ್ಧಿ ಎಂದು ಪತ್ರಿಕೆಗಳಲ್ಲಿ ಬರೆದಿದ್ದರು. ಈಗ ಸರಕಾರಿ ಆದೇಶ ಆಗಿಲ್ಲವೆಂದು ನಮ್ಮ ಶಾಸಕ ರಘು ಅವರು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಆದೇಶದ ಅನುಮೋದನೆ ಯಾವಾಗ ಎಂದು ಕೇಳಿದರು. ಈ ಡಿಸೆಂಬರ್ ವರೆಗೆ ಮೊತ್ತ ಬರಲಾರದು ಎಂದು ಆಕ್ಷೇಪಿಸಿದರು.
ಕೌನ್ಸಿಲ್ ಸಭೆಗೆ ಸಭಾಂಗಣಗಳು ಎಲ್ಲಿವೆ?
5 ಪಾಲಿಕೆ ಮಾಡಲು ಹೊರಟಿದ್ದಾರೆ. ಬೆಂಗಳೂರು ಕೇಂದ್ರ ಹೊರತುಪಡಿಸಿ 120 ಜನರ ಕೌನ್ಸಿಲ್ ಸಭೆ ನಡೆಸಲು ಇನ್ನೆಲ್ಲಿ ಅವಕಾಶ ಇದೆ ಎಂದು ಆರ್.ಅಶೋಕ್ ಅವರು ಪ್ರಶ್ನೆ ಮಾಡಿದರು.
ನಾಮನಿರ್ದೇಶಿತರು 20 ಜನ, 40 ಜನ ಅಧಿಕಾರಿಗಳು ಕುಳಿತುಕೊಳ್ಳಬೇಕು. 30 ಜನ ಮಾಧ್ಯಮದವರೂ ಇರುತ್ತಾರೆ. 200 ಜನರು ಕುಳಿತುಕೊಳ್ಳುವ 4 ಸಭಾಂಗಣ ಎಲ್ಲಿದೆ ಎಂದು ಕೇಳಿದರು. ಈ ಸಭೆ ಕಾನೂನಿನ ಪ್ರಕಾರ ನಡೆದಿದೆಯೇ ಎಂದು ಪ್ರಶ್ನಿಸಿದರು.
ಕೌನ್ಸಿಲ್‍ನಲ್ಲಿ ಹೋರಾಟ ಮಾಡಿದ್ದೇವೆ. ಈಗ ಕಾನೂನುಪ್ರಕಾರ ಪಿಐಎಲ್ ಹಾಕಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಶಾಸಕರಾದ ಎಸ್.ಆರ್. ವಿಶ್ವನಾಥ್, ಮುನಿರತ್ನ, ಎಸ್. ಮುನಿರಾಜು, ಎಸ್. ರಘು, ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಅವರು ಉಪಸ್ಥಿತರಿದ್ದರು.