ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


""ರಾಜ್ಯ ಸರಕಾರ ಕುಂಭಕರ್ಣ ನಿದ್ರೆಯಿಂದ ಎದ್ದು ಬರಲಿ''
""ರೈತರ ನೆರವಿಗೆ ಧಾವಿಸಿ- ಸಿಎಂಗೆ ವಿಜಯೇಂದ್ರ ಮನವಿ"_
ಕಲಬುರ್ಗಿ: ಜಾತಿ ಗಣತಿಯಲ್ಲಿ ಸರಕಾರ ಮುಳುಗಿ ಹೋಗಿದೆ. ಅದು ನಡೆಯುತ್ತದೆ. ಆದರೆ, ಸರಕಾರದ ಆದ್ಯತೆ ರಾಜ್ಯದ ರೈತರ ಬಗ್ಗೆ ಇರಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರ ಜೊತೆ ಹುಡುಗಾಟಿಕೆ ಆಡದಿರಿ. ತಕ್ಷಣ ಪರಿಹಾರ ಘೋಷಿಸಿ ಎಂದು ತಿಳಿಸಿದರು. ನಿಮ್ಮ ಕೃಷಿ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇಲ್ಲಿನ ಉಸ್ತುವಾರಿ ಸಚಿವರು ಆಕಾಶದಲ್ಲೇ ಇರುತ್ತಾರೆ. ಅವರು ನೆಲಕ್ಕೆ ಇಳಿಯುವುದಿಲ್ಲ ಎಂದು ಟೀಕಿಸಿದರು. ರಾಜ್ಯಕ್ಕೆ ಪಾಠ ಹೇಳುವ ಪ್ರಿಯಾಂಕ್ ಖರ್ಗೆಯವರು ಇಂಥ ಸಂದರ್ಭದಲ್ಲಾದರೂ ಸ್ವಲ್ಪ ಭೂಮಿಗೆ ಇಳಿದು ರೈತರ ಹೊಲಕ್ಕೆ ಭೇಟಿ ಕೊಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯ ಸರಕಾರ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು.
 ರೈತರು ಮುಂದಿನ ಬೆಳೆ ಬೆಳೆಯಲಾಗದ ಸ್ಥಿತಿ ಬಂದಿದೆ. ಅವರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರಕಾರವು ಕುಂಭಕರ್ಣ ನಿದ್ರೆಯಿಂದ ಎದ್ದು ಬಂದು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ನಿಮ್ಮ ಪುಣ್ಯಾತ್ಮ ಸಚಿವರನ್ನು ಹಳ್ಳಿಗಳಿಗೆ ಕಳುಹಿಸಿ..
ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಪರಿಹಾರ ಕೊಡುವುದು ದೂರದ ಮಾತು. ರಾಜ್ಯ ಸರಕಾರ ಬದುಕಿದೆಯೇ ಎಂದು ಕೇಳಿದರು. ರಾಜ್ಯದ ಕೃಷಿ, ಕಂದಾಯ, ಉಸ್ತುವಾರಿ ಸಚಿವರು ಏನು ಕಡಿದು ಕಟ್ಟೆ ಹಾಕುತ್ತಿದ್ದಾರೆ? ಅವರೆಲ್ಲ ಬೆಂಗಳೂರಿಗೇ ಸೀಮಿತರಾಗಿದ್ದಾರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಾನು ಇವತ್ತು ಶಿಕಾರಿಪುರದಲ್ಲಿ ಇರಬೇಕಿತ್ತು. ನಾಳೆ ಹುಬ್ಬಳ್ಳಿ ಕಾರ್ಯಕ್ರಮ ಇತ್ತು. ಆಡಳತ ಪಕ್ಷಕ್ಕೆ ಇದ್ದಷ್ಟೇ ಕರ್ತವ್ಯ ವಿರೋಧ ಪಕ್ಷಕ್ಕೂ ಇದೆ. ರೈತರು ಸಂಕಷ್ಟದಲ್ಲಿದ್ದಾಗ ನಾವು ಅವರ ಧ್ವನಿ ಆಗದೇ ಇದ್ದರೆ, ಈ ಸರಕಾರ ಇದ್ದೂ ಸತ್ತಂತೆ ಎಂದು ನುಡಿದರು. ನಾನು ರಾಜಕಾರಣ ಮಾಡುತ್ತಿಲ್ಲ; ದಯವಿಟ್ಟು ನಿಮ್ಮ ಪುಣ್ಯಾತ್ಮ ಸಚಿವರನ್ನು ಹಳ್ಳಿಗಳಿಗೆ ಕಳಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಅವರು ರೈತರ ಹೊಲಕ್ಕೆ ಭೇಟಿ ಕೊಡಲಿ; ಶೇ 70-80 ಬೆಳೆನಾಶವಾಗಿದೆ. ವಿಮೆಯೂ ಕೆಲವೆಡೆ ಸಿಗುತ್ತಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದ್ದು ಮುಠ್ಠಾಳರ ಸರಕಾರ..
ರಾಜ್ಯದ ಕಾಂಗ್ರೆಸ್ ಪಕ್ಷದ್ದು ಮುಠ್ಠಾಳರ ಸರಕಾರ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏಕಾಂಗಿಯಾಗಿ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್‍ಡಿಆರ್‍ಎಫ್ ಮಾದರಿಯ ನೆರವು ನೀಡಿದ್ದರು. ಇದೆಲ್ಲವನ್ನೂ ನಾನು ನೆನಪಿಸುತ್ತಿದ್ದು, ಅದರಿಂದಲಾದರೂ ಸಿದ್ದರಾಮಯ್ಯನವರು ಎಚ್ಚತ್ತುಕೊಂಡು ಸ್ಪಂದಿಸಲಿ ಎಂದು ಹೇಳುತ್ತಿದ್ದೇನೆ ಎಂದರು.
ಎನ್‍ಡಿಆರ್‍ಎಫ್ ಹಣವನ್ನು ಕೇಂದ್ರ ಕೊಟ್ಟೇ ಕೊಡಲಿದೆ. ಆದರೆ, ರಾಜ್ಯ ಸರಕಾರ ಏನು ಮಾಡುತ್ತಿದೆ? ಅವರಿಗೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಸಚಿವ ಪ್ರಿಯಾಂಕ್ ಖರ್ಗೆಯವರ ಸ್ವಕ್ಷೇತ್ರ ಚಿತ್ತಾಪುರದ ರೈತರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಂಡು ರಾಜ್ಯ ಸರಕಾರ ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಒತ್ತಾಯಿಸಿದರು.





Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್