ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ಸಂಪಾದಕರ ಜೊತೆ ಡಾ.ಹುಲಿಕಲ್ ನಟರಾಜ್ ರವರು ಸಂವಾದ ಹಾಗೂ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿ ಪ್ರಧಾನ ಮಾಡಿರುವಂಥದ್ದು
ಹಾಗೂ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರು ಕೊಟ್ಟಿರುವಂತಹ ಪ್ರಶಸ್ತಿ ಪ್ರಧಾನ ಮಾಡಿರುವಂತದ್ದು
ಬೆದರಿಕೆಗೆ ಜಗ್ಗೆನು, ಪವಾಡ ಭಂಜನೆ ಬಿಡೆನು: ಹುಲಿಕಲ್ ನಟರಾಜ್
ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ರಾಜ್ಯ ಹಾಗೂ ಹೊರಗಡೆಯೂ ಸಂಚರಿಸಿ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಗಳನ್ನು ನೀಡುತ್ತಿರುವುದಲ್ಲದೆ ಅಸಂಖ್ಯ ದೆವ್ವ ಹಿಡಿದ, ಮಾಟ ಮಂತ್ರಗಳ ಪ್ರಭಾವಕ್ಕೆ ಒಳಗಾದ, ಬಾನಾಮತಿ ಸಂಕಷ್ಟಕ್ಕೆ ಸಿಲುಕಿದ ಜನರು, ಊರುಗಳನ್ನು ಅದರಿಂದ ಮುಕ್ತವಾಗಿಸಿರುವ ಹುಲಿಕಲ್ ನಟರಾಜ್ ಅವರನ್ನು ಕರ್ನಾಟಕ ಸರ್ಕಾರವು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸದಸ್ಯರನ್ನಾಗಿಸಿದೆ. ಅವರೊಂದಿಗೆ ಅವರ ಮುಂದಿನ ಯೋಜನೆಗಳ ಕುರಿತಾದ ಮಾತುಕತೆ ಇಲ್ಲಿದೆ.
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಮೇಲೆ ಹೆಚ್ಚು ಸಕ್ರಿಯರಾಗಿದ್ದೀರಲ್ಲ, ಹೇಗೆ?
ನಾನು ಶಿಕ್ಷಕನಾಗಿ ವೃತ್ತಿ ಪ್ರಾರಂಭಿಸಿದ ದಿನಗಳಲ್ಲಿಯೇ ನನಗೆ ದಿ. ಎಚ್.ನರಸಿಂಹಯ್ಯ ಅವರ ಒಡನಾಟ ದೊರೆಯಿತು. ಅವರಿಂದ ತರಬೇತಿ ಪಡೆದ ಪವಾಡಗಳ ರಹಸ್ಯ ಬಯಲು ಮಾಡಲು ಪ್ರಾರಂಭಿಸಿದೆ. ಅದಕ್ಕೂ ಮುನ್ನ ನನ್ನ ತಾಯಿಯ ಮೇಲೆ ಕಣ್ಣು ಹಾಕಿದ ದೇವಮಾನವನನ್ನು ವಿರೋಧಿಸಿ ನಾನು ಈ ಮೂಢ ಆಚರಣೆಗಳನ್ನು ನಿವಾರಿಸಲು ನಿರ್ಧರಿಸಿದ್ದೆ. ಅದಕ್ಕೆ ಪೂರಕವಾಗಿ ನನಗೆ ಎಚ್ಚೆನ್ ಅವರ ಮಾರ್ಗದರ್ಶನ ದೊರೆಯಿತು. ನಾನು ಪವಾಡ ರಹಸ್ಯ ಬಯಲು ಮಾಡಲು ಪ್ರಾರಂಭಿಸಿದ ದಿನದಿಂದಲೂ ನನಗೆ ಬಿಡುವು ಎನ್ನುವುದೇ ಇಲ್ಲ. ರಾಜ್ಯದ ಯಾವುದೋ ಮೂಲೆಯಿಂದ ನನಗೆ ಕರೆಗಳು ಬರುತ್ತಲೇ ಇರುತ್ತವೆ. ನಾನು ಸಂಚರಿಸುತ್ತಲೇ ಇರುತ್ತೇನೆ. ನಿವೃತ್ತನಾದ ನಂತರ ನನಗೆ ಶಾಲೆಯ ಆಡಳಿತದ ಜವಾಬ್ದಾರಿ ಇಲ್ಲದಿರುವುದರಿಂದ ಹೆಚ್ಚಿನ ತೊಡಗಿಕೊಳ್ಳುವಿಕೆ ಸಾಧ್ಯವಾಗಿದೆ. ಹಾಗೆ ನೋಡಿದರೆ ನಿವೃತ್ತಿಯ ನಂತರ ಮತ್ತಷ್ಟು ಹೆಚ್ಚು ಜನರಿಗೆ ತಲುಪಲು ಸಾಧ್ಯವಾಗಿದೆ. ಅಂಧ ವಿಶ್ವಾಸ ನಿವಾರಣೆ ಮತ್ತಷ್ಟು ಸದೃಢವಾಗಿದೆ.
ಯಾವುದೇ ಪವಾಡದ ಹಿಂದೆ ಮಾನವ ಕೈವಾಡವೇ ಇರುತ್ತದಲ್ಲ, ಅವರು ನಿಮ್ಮನ್ನು ವಿರೋಧಿಸುವುದಿಲ್ಲವೇ?
ಮೊದಲಿಗೆ ನಾನು ಆ ಪ್ರದೇಶಗಳಿಗೆ ಹೋದಾಗ ನನಗೆ ಬೆದರಿಕೆ ಬರುತ್ತಿದ್ದವು. ಆದರೆ ಸರ್ಕಾರದ ಅಧಿಕಾರಿಗಳು, ಪೊಲೀಸರು ಅಂದಿಗೂ ಇಂದಿಗೂ ನನಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಮೊಬೈಲ್ ಸಂವಹನ ಹೆಚ್ಚಾದಂತೆ ಬೆದರಿಸುವ ವಿಧಾನಗಳೂ ಹೆಚ್ಚಾಗಿವೆ. ಈಗ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನನ್ನು ಬೆದರಿಸುವವರು, ಟೀಕಿಸುವವರು ಹೆಚ್ಚಾಗಿದ್ದಾರೆ. ಅಂಧ ವಿಶ್ವಾಸ, ಮೂಢನಂಬಿಕೆಯನ್ನು ವಿರೋಧಿಸುವ, ಅವುಗಳ ಹೆಸರಿನಲ್ಲಿ ಜನರನ್ನು ವಂಚಿಸುವವರನ್ನು ಬಯಲಿಗೆಳೆಯುವುದರಿಂದ ಧರ್ಮ ವಿರೋಧಿ ಎಂಬ ಪಟ್ಟ ಕಟ್ಟಿದ್ದಾರೆ. ನಾನು ಧರ್ಮ ವಿರೋಧಿಯಲ್ಲ. ಅಂಧಾನುಚರಣೆಗಳ ವಿರೋಧ ಅಷ್ಟೇ. ಈ ಸಣ್ಣ ವ್ಯತ್ಯಾಸವನ್ನು ಕಂಡುಕೊಳ್ಳಬೇಕಷ್ಟೇ.
ನಿಮ್ಮ ದಿನಚರಿ ಹೇಗಿರುತ್ತದೆ?
ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ಆಪ್ತ ಸಮಾಲೋಚನಾ ಕೇಂದ್ರವಿದೆ. ರಾಜ್ಯದ ಮೂಲೆ ಮೂಲೆಯಿಂದ ಜನರು ಅಲ್ಲಿಗೆ ಬರುತ್ತಾರೆ. ಸಾಮಾನ್ಯ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು ದೆವ್ವ, ಭೂತಗಳಂತೆ ಕಾಡುತ್ತಿರುತ್ತವೆ. ಅವುಗಳನ್ನು ಆಪ್ತ ಸಮಾಲೋಚನೆ ಮೂಲಕ ಬಗೆ ಹರಿಸುತ್ತೇನೆ. ಮನೋವೈದ್ಯರು ಅವರಿಗೆ ಬೇಕಾದ ಚಿಕಿತ್ಸೆ ನೀಡುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಅಸಂಖ್ಯ ಜನರು ಬರುತ್ತಾರೆ. ಇದಲ್ಲದೆ ವಿಜ್ಞಾನ ಪ್ರಸರಣ ಯೋಜನೆಗಳು, ಪವಾಡ ರಹಸ್ಯ ಬಯಲು ನಡೆದೇ ಇರುತ್ತವೆ. ಹೊಸ ಹೊಸ ಬಗೆಯ ಮಾಟ ಮಂತ್ರಗಳ ಪ್ರಕರಣಗಳನ್ನು ಬಯಲಿಗೆಳೆಯಲು ಸಂಚರಿಸುವುದೂ ಇದೆ. ಪರಿಸರ ಜಾಗೃತಿ, ಆರೋಗ್ಯಸೇವೆಗಳಿಗೆ ನನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ.
ನಿಮ್ಮ ಚಟುವಟಿಕೆಗಳಿಗೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ?
ಮನಸ್ಸಿದ್ದರೆ ಮಾರ್ಗ ಎಂದು ಹಿರಿಯರು ಹೇಳಿಲ್ಲವೇ? ಮಕ್ಕಳು ತಮ್ಮಷ್ಟಕ್ಕೆ ತಾವಿದ್ದಾರೆ. ನಿವೃತ್ತ ಮೇಷ್ಟ್ರು ನನಗೆ ಏನು ಕೆಲಸ? ಚಟುವಟಿಕೆಯಿಂದ ಇದ್ದಷ್ಟೂ ನಮ್ಮ ಶಕ್ತಿ ಹೆಚ್ಚುತ್ತದೆ. ಅದನ್ನು ಯಾರು ಬೇಕಾದರೂ ಪ್ರಯತ್ನಿಸಬಹುದು. ಎಲ್ಲರಿಗೂ ದಿನದ ಇಪ್ಪತ್ನಾಲ್ಕು ಗಂಟೆಗಳೇ ಇರುತ್ತವೆ. ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು. ನನಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ಇದೆ. ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವವರ ಮುಖದಲ್ಲಿ ನಗು ನೋಡುವುದು ನನ್ನ ಉತ್ಸಾಹ ಹೆಚ್ಚಿಸುತ್ತದೆ.
ನೀವು ನಡೆದು ಬಂದ ದಾರಿ ಕುರಿತು ವಿವರಿಸಿ
ನಾನು ತುಮಕೂರು ಜಿಲ್ಲೆಯ ಹುಲಿಕಲ್ ಗ್ರಾಮದಿಂದ ದೊಡ್ಡಬಳ್ಳಾಪುರಕ್ಕೆ ಬಂದಾಗ ನನ್ನಲ್ಲಿ ಸಾಧಿಸುವ ಛಲವಿತ್ತು. ಪೂರಕವಾಗಿ ಎಚ್.ನರಸಿಂಹಯ್ಯ ಮಾರ್ಗದರ್ಶನ ಈ ದಾರಿಯನ್ನು ನಿಚ್ಚಳವಾಗಿಸಿತು. ಶಿಕ್ಷಕರಾಗಿ ಪವಾಡ ಭಂಜನೆ ಮೂಲಕ ವಿಜ್ಞಾನ ಹರಡುವ ಕೆಲಸಕ್ಕೆ ಸರ್ಕಾರವೂ ಬೆಂಬಲ ನೀಡಿತು. ಈ ದಾರಿಯಲ್ಲಿ ಎದುರಿಸಿದ್ದು ಅಸಂಖ್ಯ ದೆವ್ವಗಳು, ದೇವಮಾನವರು, ಭಾನಾಮತಿ ಘಟನೆಗಳು, ಊರಿಗೆ ಊರೇ ಬೆಂಕಿ ಹೊತ್ತಿಕೊಳ್ಳುವ ವಿಸ್ಮಯಗಳು, ಕಣ್ಣಿನಲ್ಲಿ ಕಲ್ಲು ಬರುವುದು, ಪುನರ್ಜನ್ಮದ ನೆನಪು ಇತ್ಯಾದಿ ಅಸಂಖ್ಯ ಪ್ರಕರಣಗಳನ್ನು ಕಂಡಿದ್ದೇನೆ. ಈ ಎಲ್ಲವೂ ನನ್ನ ಗಟ್ಟಿಗೊಳಿಸುತ್ತಾ, ನನ್ನ ಬುದ್ಧಿಗೆ ಸಾಣೆ ಹಿಡಿದವು. ಈ ಎಲ್ಲವುಗಳಲ್ಲೂ ದೇವರು, ದೆವ್ವ ಅಥವಾ ಅತಿಮಾನುಷ ಶಕ್ತಿಗಳಾವೂ ಇಲ್ಲ ಎಂದು ಕಂಡುಕೊಂಡೆ. ಈ ಎಲ್ಲ ಪ್ರಕರಣಗಳ ಹಿಂದೆಯೂ ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಕಟ್ಟುಪಾಡುಗಳು, ಬಿಕ್ಕಟ್ಟುಗಳು, ಸಮಸ್ಯೆಗಳು ಇರುವುದನ್ನು ಮಾತ್ರ ಕಂಡಿದ್ದೇನೆ.
ಪವಾಡ ಭಂಜನೆಯ ದಾರಿಯಲ್ಲಿ ಪಡೆದುಕೊಂಡ ಮಹತ್ತರ ಸಂತೋಷ ಏನು?
ದೆವ್ವ ಅಥವಾ ಅತಿಮಾನವರೆನಿಸಿಕೊಂಡವರ ಕೈಯಲ್ಲಿ ಸಿಲುಕಿ ನಲುಗಿ ಹೇಳಲೂ ಆಗದೆ, ಅನುಭವಿಸಲೂ ಆಗದೆ ಸಂಕಟ ಪಡುವವರನ್ನು ಅದರಿಂದ ಮುಕ್ತರಾಗಿಸಿದಾಗ ಆಗುವ ಆನಂದ ಕೋಟಿ ಕೊಟ್ಟರೂ ದೊರಕದು. ಸಮಾಜವು ವಿವೇಚನೆಯಿಂದ, ಸುಸ್ಥಿತಿಯಲ್ಲಿ ಇರುವುದು ನನ್ನ ಬಯಕೆ.
ಬೆದರಿಕೆಯ ಪ್ರಕರಣಗಳು ಬಂದಾಗ ಹೇಗೆ ಎದುರಿಸುವಿರಿ?
ಮನುಷ್ಯ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರತಿರೋಧ ತೋರುವುದು ಸಹಜ. ಆದರೆ ನನ್ನ ಉದ್ದೇಶ ಒಳ್ಳೆಯದು ಎಂದು ಅರ್ಥ ಮಾಡಿಕೊಂಡ ನಂತರ ಬಹಳಷ್ಟು ಮಂದಿ ಸುಮ್ಮನಾಗುತ್ತಾರೆ. ಕೆಲ ಪ್ರಕರಣಗಳಲ್ಲಿ ಜನರನ್ನು ದಾರಿ ತಪ್ಪಿಸಿ ಅವರನ್ನು ಶೋಷಿಸುತ್ತಿರುವವರು ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸುವುದೂ ಇದೆ. ಸಾರ್ವಜನಿಕ ಬದುಕಿನಲ್ಲಿ ಇದೆಲ್ಲ ಸಹಜ. ನಾನು ಜೀವ ಬೆದರಿಕೆಗಳಿಗೆ ಬಗ್ಗಿದರೆ ಪವಾಡ ಭಂಜನೆಯ ಹಾದಿ ಕೊನೆಯಾದಂತೆ. ಪವಾಡ ಭಂಜನೆಯ ಹಾದಿಯಲ್ಲಿ ಸಾವು ಬಂದರೂ ಅದು ಸ್ವೀಕಾರಾರ್ಹ.
ಪವಾಡ ಸಂಶೋಧನಾ ಕೇಂದ್ರದ ಮೂಲಕ ಪವಾಡ ಭಂಜನೆ ಮಾತ್ರ ನನ್ನ ಕಾರ್ಯಕ್ಷೇತ್ರವಲ್ಲ. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಸ್ಥಾಪನೆ ಮಾಡಿ ರಾಜ್ಯದ ಹಲವೆಡೆ ಅತ್ಯಾಧುನಿಕ ತಾರಾಲಯಗಳನ್ನು ನಿರ್ಮಿಸುವ ಯೋಜನೆ ಚಾಲ್ತಿಯಲ್ಲಿದೆ. ಮೊದಲಿಗೆ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ಹಾಗೂ ತುಮಕೂರಿನ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಎಂಜಿನಿಯರಿಂಗ್ ಗಳಲ್ಲಿ 2.5-3 ಕೋಟಿ ವೆಚ್ಚದಲ್ಲಿ ತಾರಾಲಯ ನಿರ್ಮಾಣ ನಡೆದಿದೆ. ಈ ಎಲ್ಲ ಚಟುವಟಿಕೆಗಳೂ ವಿಜ್ಞಾನ ಮನೋಭಾವ ಹೆಚ್ಚಿಸುವ ಕಾರ್ಯಸೂಚಿ ಹೊಂದಿವೆ.
ಲಯನ್ಸ್ ಕ್ಲಬ್ ಚಟುವಟಿಕೆಗಳ ಕುರಿತು ಹೇಳಿ
ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ನಲ್ಲಿ ದಶಕಗಳಿಂದ ಸಕ್ರಿಯನಾಗಿದ್ದೇನೆ. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಲಯನ್ಸ್ ಡಯಾಲಿಸಿಸ್ ಕೇಂದ್ರ ಉದ್ಘಾಟನೆಯಾಯಿತು. ಇಲ್ಲಿ ಪ್ರತಿನಿತ್ಯ 18-20 ಮಂದಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ತಿಂಗಳ ಮೊದಲ ಭಾನುವಾರ ಸುಮಾರು 150 ಮಂದಿ ಮಧುಮೇಹ ಪರೀಕ್ಷೆ ಮಾಡಿಸಲಾಗುತ್ತದೆ. ಪ್ರತಿ ತಿಂಗಳ ಸೋಮವಾರ ಸುಮಾರು 100-125 ಮಂದಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ. ಹೆಣ್ಣುಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ಹೆಣ್ಣುಮಕ್ಕಳ ಜಿಮ್ ನಿರ್ಮಾಣ ಮಾಡಲಾಗಿದೆ. ಆರಕ್ಷಕ ಠಾಣೆಗೆ 100 ಬ್ಯಾರಿಕೇಡ್ ನೀಡಲಾಗಿದೆ. “ಸೂರು ಒಂದು, ನೂರು ಕಾರ್ಯಕ್ರಮ”ದಡಿಯಲ್ಲಿ ಒಂದು ಕೋಟಿಗೂ ಹೆಚ್ಚು ದಾನಿಗಳಿಂದ ಹಣ ಪಡೆದು ಶಾಶ್ವತ ಚಟುವಟಿಕೆಗಳನ್ನು ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ರೂಪಿಸಿರುವುದು ನನ್ನ ಹೆಮ್ಮೆ.
ಭವಿಷ್ಯದ ಗುರಿಯೇನು?
ವೈಜ್ಞಾನಿಕ ಪ್ರವೃತ್ತಿ ಪ್ರತಿ ಮನುಷ್ಯನಲ್ಲೂ ವಿಸ್ತರಿಸುವಂತೆ ಸರ್ಕಾರದ ವತಿಯಿಂದ, ಸಾರ್ವಜನಿಕ ಸಂಸ್ಥೆಗಳಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಪ್ರಸಾರ ಮಾಡುವುದು ನನ್ನ ಧ್ಯೇಯ. ಅದರಲ್ಲಿ ಕೈ ಜೋಡಿಸಲು ರಾಜ್ಯದ ಜನರನ್ನು ಆಹ್ವಾನಿಸುತ್ತೇನೆ. ಈಗಾಗಲೇ ಅಪಾರ ಸದಸ್ಯತ್ವ ಹೊಂದಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಈ ಚಟುವಟಿಕೆಗಳನ್ನು ದೇಶದ ಮೂಲೆ ಮೂಲೆಗೂ ಜಗತ್ತಿನ ಎಲ್ಲ ಕಡೆಗಳಿಗೂ ವಿಸ್ತರಿಸುವುದು ನನ್ನ ಗುರಿ. ನನ್ನ ಯೂಟ್ಯೂಬ್ ಚಾನೆಲ್ ವಿಶ್ವದಾದ್ಯಂತ ಕೋಟ್ಯಂತರ ಜನರನ್ನು ತಲುಪಿದೆ. ಬಹುಮಾಧ್ಯಮಗಳ ಮೂಲಕ ವಿಜ್ಞಾನ ಪ್ರಸಾರ ಮಾಡುವೆ. ಹಲವು ಚಲನಚಿತ್ರಗಳ ನಿರ್ಮಾಣದ ಗುರಿಯೂ ಇದೆ. ಈಗಾಗಲೇ ಪತ್ರಿಕೆ, ಟಿ.ವಿ., ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು ಈ ಮಾಧ್ಯಮಗಳು ಎಷ್ಟು ಸಮರ್ಥ ಹಾಗೂ ವೇಗವಾಗಿ ಮಾಹಿತಿಯನ್ನು ಹರಡಬಲ್ಲವೋ ಅಷ್ಟೇ ವೇಗವಾಗಿ ಸುಳ್ಳುಗಳನ್ನೂ ಹರಡುತ್ತವೆ. ಅದು ತಪ್ಪಬೇಕು. ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮದ ಬಳಕೆ ಪ್ರಸ್ತುತದ ಅಗತ್ಯ.
ನಿಮ್ಮ ಜನಪ್ರಿಯ ಸಾಹಿತ್ಯ ಕುರಿತು ಹೇಳಿ
“ಹುಲಿ ಹೆಜ್ಜೆ” ಎನ್ನುವುದು ನನ್ನ ಕುರಿತು ಅಭಿಮಾನದಿಂದ ರಚನೆಯಾದ ಅಭಿನಂದನಾ ಗ್ರಂಥ. ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ನಾಟಕ, ಕಾವ್ಯ, ಗದ್ಯ ಪ್ರಕಾರಗಳಲ್ಲಿ ಅಲ್ಲದೆ ಹಾಗೂ ಪವಾಡ ಭಂಜನೆ ಕುರಿತಾಗಿ ನೀವು ಮಾಡಿ ಪವಾಡ, ಮನಸೇಕೆ ಹೀಗೆ, ಮನಸೇ ತಲ್ಲಣಿಸದಿರು, ಅಂಗೈಯಲ್ಲಿ ಆರೋಗ್ಯ ಇತ್ಯಾದಿ ಹಲವು ಕೃತಿಗಳು ಬಂದಿವೆ. ಮತ್ತಷ್ಟು ಕೃತಿಗಳ ರಚನೆಯಲ್ಲಿದ್ದೇನೆ. ನನ್ನ ಪವಾಡ ರಹಸ್ಯ ಬಯಲು ಮಾಡಿದ ಅನುಭವಗಳನ್ನು ಸಹೃದಯ ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ.
ತಮ್ಮ ಅಸಂಖ್ಯ ಪ್ರಶಸ್ತಿಗಳಲ್ಲಿ ಮುಖ್ಯವಾದವು…
ರಾಜ್ಯ, ದೇಶ ಹಾಗೂ ವಿದೇಶಗಳ ಸಾವಿರದೈನೂರಕ್ಕೂ ಹೆಚ್ಚು ಪ್ರಶಸ್ತಿಗಳು ಬಂದರೂ ಕೂಡಾ ತುಮಕೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್, ಭಾರತ ಸರ್ಕಾರದಿಂದ ರಾಷ್ಟ್ರಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಯೂಟ್ಯೂಬ್ ನಿಂದ ರಜತ ಪದಕ, ಕತಾರ್ ದೇಶದಿಂದ “ಕನ್ನಡ ರತ್ನ” ಪ್ರಶಸ್ತಿ, ಪೆರಿಯಾರ್ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ ಮುಂತಾದವುಗಳು ನನಗೆ ದೊರೆತ ಪ್ರಮುಖ ಗೌರವಗಳು.
ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ಸಂಪಾದಕರ ಜೊತೆ ಹುಲಿಕಲ್ ನಾಗರಾಜ್ ಅವರ ಸಂವಾದ