ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಉತ್ತಮ ನಾಯಕರಾಗಲು ರಾಜಕೀಯ ವಿಜ್ಞಾನ ಅತ್ಯಗತ್ಯ : ಡಾ. ಲಿಂಗರಾಜ ಗಾಂಧಿ - ಗೌರವಾನ್ವಿತ ಕುಲಪತಿಗಳು.
ಬೆಂಗಳೂರು, ಸೆ . 25: ದೇಶದಲ್ಲಿ ಉತ್ತಮ ನಾಗರಿಕ ಹಾಗೂ ಉತ್ತಮ ನಾಯಕರಾಗಬೇಕೆಂದರೆ ರಾಜಕೀಯ ವಿಜ್ಞಾನ ಅತ್ಯಗತ್ಯವಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಗೌರವಾನ್ವಿತ ಕುಲಪತಿಗಳು ಡಾ. ಲಿಂಗರಾಜ ಗಾಂಧಿ ಹೇಳಿದರು.
ಬುಧವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂ.ನಗರ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಾಪಕರ ಅಕಾಡೆಮಿವತಿಯಿಂದ ಹಮ್ಮಿಕೊಂಡಿದ್ದ ‘ಎಸ್.ಇ.ಪಿ 2024 ರ ಪಠ್ಯಕ್ರಮದನ್ವಯ ಮೊದಲ ಹಾಗೂ ಎರಡನೇ ಸೆಮಿಸ್ಟರ್ ರಾಜ್ಯಶಾಸ್ತ್ರ ಪತ್ರಿಕೆ’ಗಳ ಕುರಿತು ನಡೆದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ರಾಜಕೀಯ ವಿಜ್ಞಾನ ಅಭಿವೃದ್ಧಿ ಹೊಂದಿದಾಗ ದೇಶದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಾಗ ಮಾತ್ರ, ಸ್ಥಳೀಯವಾಗಿ ಮತ್ತು ಜಾಗತಿಕವಾಗಿ, ಅಂತರರಾಷ್ಟ್ರೀಯ ಸಂಬoಧಗಳು, ಸಾರ್ವಜನಿಕ ನೀತಿ, ಕಾನೂನು ವ್ಯವಸ್ಥೆಗಳು, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ರಾಜಕೀಯ ವಿಜ್ಞಾನವನ್ನು ಅಧ್ಯಯನ ಮಾಡುವುದು ವಿದ್ಯಾರ್ಥಿಗಳಿಗೆ ರಾಜಕೀಯ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ಅವರ ಸಮುದಾಯಗಳು ಮತ್ತು ರಾಷ್ಟ್ರದ ರಾಜಕೀಯ ಜೀವನದಲ್ಲಿ ಪಾಲ್ಗೊಳ್ಳಲು ಅವರನ್ನು ಸಿದ್ಧಪಡಿಸುತ್ತದೆ ಎಂದು ಬಿ. ಸಿ. ಯು. ಪಿ. ಟಿ. ಎ ಅಧ್ಯಕ್ಷ ಡಾ. ನಾರಾಯಣಪ್ಪ ಏನ್. ಕೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಲಸಚಿವ(ಮೌಲ್ಯಮಾಪನ) ಡಾ.ಆನಂದಕುಮಾರ್ ಸಿ.ಎಸ್.
ಸಮಾಜಸೇವಕರಾದ ಮಹೇಂದ್ರ ಮನೋತ್ ಜೈನ್ ಹಾಗೂ ಕೈಗಾರಿಕೋದ್ಯಮಿ ಮಲ್ಲಿಕಾರ್ಜುನಯ್ಯ ಬಿ.ಟಿ. ಪಾಲ್ಗೊಂಡಿದ್ದರು.
ತುಮಕೂರು ವಿ.ವಿ. ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಕೆ. ಸಿ. ಸುರೇಶ, ಸ. ಪ್ರ. ದ . ಕಾ ರಾಜಾಜಿನಗರ ಮುಖ್ಯಸ್ಥ ಡಾ. ಪೂರ್ಣಿಮಾ ಜಿ. ಆರ್. ಹಾಗೂ ಸ. ಪ್ರ. ದ. ಕಾ. ಹೆಸರ್ಘಟ್ಟ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುರೇಶಕುಮಾರ್ ಎಮ್. ಏನ್. ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಶ್ರೀಕಾಂತ ಹೆಚ್. ಹoದ್ರಾಳ, ರಾಜ್ಯಶಾಸ್ತ್ರ ಅಧ್ಯಯನ ಮಂಡಳಿ ಸದಸ್ಯರು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಬಿಓಈ ಸದಸ್ಯರಾದ ಮುತ್ತುರಾಜ ಎಸ್. ಎಚ್. ಡಾ.ಅರುಣಾಕುಮಾರಿ ಎಸ್.ಕೆ ಹಾಗೂ ರಾಜ್ಯಶಾಸ್ತ್ರ ಅಧ್ಯಾಪಕರೆಲ್ಲರೂ ಭಾಗವಹಿಸಿದ್ದರು.