ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಆಧುನಿಕ ತಂತ್ರಜ್ಞಾನದ ಅವಕಾಶಗಳು ಮಹಿಳೆಯರನ್ನು ಯಶಸ್ವಿ ಉದ್ಯಮಿಯಾಗಿಸುತ್ತಿವೆ: ಕೆ ರತ್ನಪ್ರಭಾ""

ಬೆಂಗಳೂರು: ಮಹಿಳೆಯು ಕೂಲಿ ಕಾರ್ಮಿಕರಾಗಿ ದುಡಿಯುವುದು ಮಾತ್ರವಲ್ಲದೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಕೊಳ್ಳುವ ಮೂಲಕ ಉದ್ಯಮಿಯಾಗಿ ಸಾಧನೆಗಳತ್ತ ಸಾಗುತ್ತಿದ್ದಾಳೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಕೃಷಿ ಮತ್ತು ಆಹಾರ ಉದ್ಯಮದ ಬೆಳವಣಿಗೆ ಕಡೆಗೆ ಮುಖ ಮಾಡಿದ್ದಾಳೆ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಉಬುಂಟು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಕೆ. ರತ್ನ ಪ್ರಭ ಹೇಳಿದರು.

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೀಡಿಯಾ ಟುಡೆ, ಉಬುಂಟು ಒಕ್ಕೂಟ ಮತ್ತು ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದಲ್ಲಿ ದೇಶದ ಅತಿದೊಡ್ಡ ಕೃಷಿ ಮತ್ತು ಆಹಾರ ಉದ್ಯಮ ಮೇಳ ʼಅಗ್ರಿಟೆಕ್ ಇಂಡಿಯಾ 2024ʼ ಅನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯು ಅನೇಕ ಸವಾಲುಗಳನ್ನು ಮೆಟ್ಟಿ ಮುಂದೆ ಬಂದಿದ್ದಾಳೆ. ಉಬುಂಟು ಅಂತಹ ಮಹಿಳೆಯರಿಗೆ ಅವಕಾಶವನ್ನು ಒದಗಿಸುವ ಉತ್ತಮ ವೇದಿಕೆಯನ್ನು ಸೃಷ್ಟಿಸಿದೆ. ಈ ಮೇಳದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಖರೀದಿದಾರರೊಂದಿಗೆ ಬಿ2ಬಿ ಸಭೆಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಕರ್ನಾಟಕದ ಮಹಿಳಾ ಉದ್ಯಮಿಗಳಿಗೆ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ನಿಗದಿತ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು  ಅವಕಾಶವನ್ನು ಒದಗಿಸುತ್ತದೆ"  ಎಂದು ತಿಳಿಸಿದರು.

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (CFTRI) ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಆಹಾರ ಉದ್ಯಮದಲ್ಲಿ ಮಹಿಳೆಯರು ಅಳವಡಿಸಿಕೊಂಡಿರುವ ಸಾಂಪ್ರದಾಯಿಕ ಆಹಾರ ಸಂರಕ್ಷಣಾ ವಿಧಾನಗಳು ಮತ್ತು ಆಧುನಿಕ ಆಹಾರ ತಂತ್ರಜ್ಞಾನ ನಡುವಿನ ಅಸಮಾನತೆಯ ಕುರಿತು ಪ್ರಸ್ತಾಪಿಸಿದರು. ತಂತ್ರಜ್ಞಾನಗಳ ಬಳಕೆಯಿಂದ ಆಹಾರ ಉತ್ಪನ್ನಗಳು ಕೆಡದಂತೆ ಉಳಿಯುವ ಕಾಲಾವಧಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು. ಭಾರತದಲ್ಲಿ ವಿಸ್ತರಿಸುತ್ತಿರುವ ಆಹಾರ ಸಂಸ್ಕರಣಾ ಉದ್ಯಮವು ಮಹಿಳೆಯರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಆಹಾರ ಉದ್ಯಮದಲ್ಲಿ ಪೌಷ್ಟಿಕತೆ, ಆರೋಗ್ಯ ಮತ್ತು ಆರ್ಥಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂಬುದನ್ನು ವಿವರಿಸಿದರು.

ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದಲ್ಲಿನ ನೆದರ್ಲ್ಯಾಂಡ್ಸ್ ರಾಜ್ಯದ ಕೌನ್ಸಲ್ ಜನರಲ್ ಎವೂಟ್ ಡಿ ವಿಟ್ ಮಾತನಾಡಿ, ನೆದರ್ಲ್ಯಾಂಡ್ಸ್‌ನ 2.3 ಮಿಲಿಯನ್ ಉದ್ಯಮಿಗಳಲ್ಲಿ ಶೇ.36ರಷ್ಟು ಮಹಿಳೆಯರಿದ್ದು, ಶೇ.38ರಷ್ಟು ಹೊಸ ಉದ್ಯಮಿಗಳಲ್ಲಿ ಮಹಿಳೆಯರೇ ಇದ್ದಾರೆ. ಡಚ್ ಮಹಿಳೆಯರು ಪ್ರಧಾನವಾಗಿ ಕೃಷಿಗಿಂತ ಹೆಚ್ಚಾಗಿ ಆರೋಗ್ಯ ಮತ್ತು ಕಲ್ಯಾಣ ಕ್ಷೇತ್ರಗಳ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಕೃಷಿ ಉದ್ಯಮದಲ್ಲಿ ಮಹಿಳೆಯರು ತೊಡಗಿಕೊಳ್ಳಲು ಪ್ರೇರೇಪಿಸುವ ಈ ರೀತಿಯ ಸಮ್ಮೇಳನಗಳು ಆಗಾಗ್ಗೆ ಜರುಗಬೇಕು ಎಂದು ಅಭಿಪ್ರಾಯಪಟ್ಟರು. 

FSSAI ಸಲಹೆಗಾರರು ಮತ್ತು ಕೋಡೆಕ್ಸ್‌ ಮಾಜಿ ಅಧ್ಯಕ್ಷರಾದ ಶ್ರೀ. ಸಂಜಯ್ ದವೆ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಆಹಾರ ತಂತ್ರಜ್ಞಾನ ಮತ್ತು ಉದ್ಯಮದ ನಡುವೆ ಹೆಚ್ಚಿನ ಅಭಿವೃದ್ಧಿಯಾಗುತ್ತಿದೆ. ಪ್ರತಿಯೊಂದು ದೇಶವು ತನ್ನ ಆಹಾರ ರಫ್ತುಗಳನ್ನು ಹೆಚ್ಚಿಸಲು ನಿರತವಾಗಿದೆ. ಆದರೆ ಆಹಾರ ಸುರಕ್ಷತೆ ಸೇವೆಗಳನ್ನು ಒದಗಿಸುವಲ್ಲಿ ಕೊರತೆಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂಬುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ WIAB ಮುಖ್ಯ ಸಂಪಾದಕ ಮತ್ತು ಸಂಯೋಜಕರಾದ ಜಾಫರ್ ಎಸ್ ನಖ್ವಿ ಮಾತನಾಡಿ, ಆಹಾರ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದರು. ಅಲ್ಲದೆ ಕೃಷಿಯಲ್ಲಿ ಕೂಡ ಮಹಿಳೆಯರ ಸಬಲೀಕರಣಕ್ಕೆ ಈ ಮೇಳವು ಒತ್ತು ನೀಡುತ್ತಿದೆ. ವಿವಿಧ ಕ್ಷೇತ್ರದಲ್ಲಿ ಮಹಿಳೆಯರ ಕೆಲಸಗಳು ಸದ್ದು ಮಾಡುತ್ತಿದ್ದು, ಅಪಾರವಾದ ಕೊಡುಗೆಗಳನ್ನು ನೀಡುವಲ್ಲಿ ಮಹಿಳೆಯರು ನಿರತ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. 

ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಮೇಳವು 350ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿರುತ್ತದೆ. ಟರ್ಕಿ, ಚೀನಾ, ಜರ್ಮನಿ, ಥೈಲ್ಯಾಂಡ್, ಸ್ಪೇನ್, ನೆದರ್ಲ್ಯಾಂಡ್, ನೇಪಾಳ, ಶ್ರೀಲಂಕಾ, ಕುವೈತ್, ರಷ್ಯಾ, ತೈವಾನ್, ಫ್ರಾನ್ಸ್, ಇಟಲಿ, ಕೆನಡಾ, ಯುಎಇ, ಇಂಡೋನೇಷ್ಯಾ, ಬಹ್ರೇನ್, ಸಿಂಗಾಪುರ್, ಇರಾನ್, ಆಸ್ಟ್ರೇಲಿಯಾ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ಭೂತಾನ್, ಮಲೇಷಿಯಾ, ವಿಯೆಟ್ನಾಂ, ಮತ್ತು ನ್ಯೂಜಿಲ್ಯಾಂಡ್-ಉದ್ಯಮ ನಾಯಕರು, ನಾವೀನ್ಯಕಾರರು ಮತ್ತು ತಜ್ಞರು ಈ ಜಾಗತಿಕ ಕೂಟದಲ್ಲಿ ಪಾಲ್ಗೊಂಡಿದ್ದರು.

ʼಅಗ್ರಿಟೆಕ್ ಇಂಡಿಯಾ 2024ʼ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳವು ಇಂಡಿಯಾ ಫುಡೆಕ್ಸ್ ಮತ್ತು ಗ್ರೇನ್ ಟೆಕ್ ಇಂಡಿಯಾ ಸಹಯೋಗದೊಂದಿಗೆ ನಡೆಯುತ್ತಿದ್ದು, ಕೃಷಿ ಮತ್ತು ಆಹಾರ ಉದ್ಯಮದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.  ಈ ಪ್ರದರ್ಶನವು ಆಹಾರ ಉತ್ಪನ್ನಗಳು, ಫ್ರೋಜನ್ ಆಹಾರಗಳು, ತಿಂಡಿಗಳು, ಬೇಕರಿ ವಸ್ತುಗಳು, ಅನುಕೂಲಕರ ಆಹಾರಗಳು, ಸಾವಯವ ಉತ್ಪನ್ನಗಳು, ತಾಜಾ ಹಣ್ಣುಗಳು, ಆಹಾರ ಚಿಲ್ಲರೆ ವ್ಯಾಪಾರ, ಡೈರಿ ಉತ್ಪನ್ನಗಳು, ಚಹಾ, ಕಾಫಿ ಮತ್ತು ಹಣ್ಣು ಆಧಾರಿತ ಪಾನೀಯಗಳನ್ನು ಒಳಗೊಂಡಂತೆ ವೈವಿಧ್ಯಮಯ ಆಹಾರ ವಲಯದ ವಿಭಾಗಗಳು ಪ್ರದರ್ಶನದಲ್ಲಿದ್ದವು. ಅದಲ್ಲದೆ ಈವೆಂಟ್ 13ನೇ ಡೈರಿಟೆಕ್ ಇಂಡಿಯಾ, ಪೌಲ್ಟ್ರಿ ಮತ್ತು ಜಾನುವಾರು ಎಕ್ಸ್ಪೋ ಮತ್ತು ಬೇಕರಿಟೆಕ್ ಇಂಡಿಯಾದೊಂದಿಗೆ ಏಕಕಾಲದಲ್ಲಿ ನಡೆಯಲಿದೆ. ಇದು ಫಾರ್ಮ್ನಿಂದ ಫೋರ್ಕ್ವರೆಗಿನ ಆಹಾರ ಉದ್ಯಮದ ಸಂಪೂರ್ಣ ಅವಲೋಕನವನ್ನು ನೀಡಿತು.

ಆಗಸ್ಟ್ 22ರ (ಎರಡನೇ ದಿನ) ಕಾರ್ಯಕ್ರಮದಲ್ಲಿ "ವುಮೆನ್ ಇನ್ ಅಗ್ರಿಬಿಸಿನೆಸ್" - ಜಾಗತಿಕ ಸಮ್ಮೇಳನ, ಪ್ರದರ್ಶನ, ನೆಟ್ವರ್ಕಿಂಗ್ ಶೃಂಗಸಭೆ ಮತ್ತು ಪ್ರಶಸ್ತಿ ಸಮಾರಂಭವು ಕೃಷಿ ಮತ್ತು ಆಹಾರ ಕ್ಷೇತ್ರಗಳಲ್ಲಿನ ಮಹಿಳೆಯರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವು ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರಿಗೆ ಹೊಸ ಪರಿಚಯಗಳು ಮತ್ತು ಅವರ  ವೈಯಕ್ತಿಕ ಸಾಧನೆಗಳನ್ನು ಪ್ರದರ್ಶಿಸಲು ಅಮೂಲ್ಯವಾದ ವೇದಿಕೆಯನ್ನು ನೀಡುತ್ತದೆ. ಆಗಸ್ಟ್ 23ರ ಅಂತಿಮ ದಿನದ ಮೇಳದಲ್ಲಿ ಧಾನ್ಯಗಳು ಮತ್ತು ಹಿಟ್ಟು ಮಿಲ್ಲಿಂಗ್ ಉದ್ಯಮದ ನೆಟ್ವರ್ಕಿಂಗ್ ಶೃಂಗಸಭೆಯನ್ನು ಏರ್ಪಡಿಸಲಾಗುತ್ತಿದೆ. ಧಾನ್ಯಗಳು ಮತ್ತು ಹಿಟ್ಟು ಮಿಲ್ಲಿಂಗ್ ಉದ್ಯಮದ ನಿರ್ದಿಷ್ಟ ಅಗತ್ಯಗಳನ್ನು ಈ ಮೇಳದಲ್ಲಿ ತಿಳಿಸಲಾಗುತ್ತದೆ. ಈ ಸಮ್ಮೇಳನದ ಅಧಿವೇಶನವು ಉದ್ಯಮದ ಮಧ್ಯಸ್ಥಗಾರರಿಗೆ ಎದುರಾಗುವ ಸವಾಲುಗಳು, ಅವಕಾಶಗಳು ಮತ್ತು ಹೊಸ ಸಾಧ್ಯತೆಗಳನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ.



Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News