ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಪ್ರವಾಸೋದ್ಯಮ ತೆರಿಗೆ ಇಳಿಸಲು ಕೇಂದ್ರದ ಮೇಲೆ ಒತ್ತಡ: ಡಿಸಿಎಂ ಡಿ.ಕೆ.ಶಿವಕುಮಾರ್""
ಸಾಗರ ಮತ್ತು ಹಸಿರು ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ
ದಕ್ಷಿಣ ಭಾರತ ಉತ್ಸವದ ಸಂದರ್ಭದಲ್ಲಿ ಕರ್ನಾಟಕ್ಕೆ ರೂ.3750 ಕೋಟಿ ಬಂಡವಾಳ: ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ""
ಬೆಂಗಳೂರು, :ಜೂ. 14.ಪ್ರವಾಸೋದ್ಯಮ ಕ್ಷೇತ್ರದ ಮೇಲಿನ ಮಿತಿ ಮೀರಿದ ತೆರಿಗೆ ಪ್ರಮಾಣ ಇಳಿಸುವುದು ಮತ್ತು ಸಾಗರ ಪ್ರವಾಸೋದ್ಯಮಕ್ಕೆ ಇರುವ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ದಕ್ಷಿಣ ರಾಜ್ಯಗಳು ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ *ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ
ನಗರದ ಅರಮನೆ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆ ಮತ್ತು ಎಫ್.ಕೆ.ಸಿ.ಸಿ.ಐ. ವತಿಯಿಂದ ಆಯೋಜಿಸಿರುವ ಎರಡು ದಿನಗಳ ದಕ್ಷಿಣ ಭಾರತ ಉತ್ಸವಕ್ಕೆ ಶನಿವಾರ ಚಾಲನೆ ನೀಡಿದ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಮತ್ತು ಪ್ರವಾಸೋದ್ಯಮದ ಮೇಲಿನ ಹೊರೆ ತಗ್ಗಿಸಲು ದಕ್ಷಿಣದ ಎಲ್ಲಾ ರಾಜ್ಯಗಳು ಸೇರಿ ಮಾದರಿಯೊಂದನ್ನು ಸಿದ್ಧಪಡಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.
ಪ್ರವಾಸೋದ್ಯಮಕ್ಕೆ ಜಿ.ಎಸ್.ಟಿ. ದೊಡ್ಡ ಶಾಪವಾಗಿದೆ. ಶೇ. 18ರಷ್ಟು ಜಿ.ಎಸ್.ಟಿ. ವಿಧಿಸಲಾಗುತ್ತದೆ. ಬ್ಯಾಂಕ್ ಬಡ್ಡಿ, ಇತರೆ ತೆರಿಗೆಗಳು ಸೇರಿ ಶೇ. 40ರಷ್ಟು ತೆರಿಗೆ ಹೊರೆ ಈ ಉದ್ಯಮದ ಮೇಲೆ ಬೀಳುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಾದರೆ ಈ ಹೊರೆ ತಗ್ಗಬೇಕು ಎಂದು ಅಭಿಪ್ರಾಯಪಟ್ಟರು.
ಅದೇ ರೀತಿ ಸಾಗರ ಪ್ರವಾಸೋದ್ಯಮ ಮತ್ತು ಹಸಿರು ಪ್ರವಾಸೋದ್ಯಮಕ್ಕೂ ಕೆಲವು ನಿರ್ಬಂಧಗಳಿವೆ. ಸಮುದ್ರ ಮತ್ತು ಕಾಡುಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳಬಾರದು ಎಂಬ ನಿಯಮವಿದೆ. ಆದರೆ, ಗಂಗಾನದಿಯ ತಟದಲ್ಲಿ 30-40 ಮೀಟರ್ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಅವಕಾಶವಿದೆ. ಈ ತಾರತಮ್ಯ ನಿವಾರಣೆಯಾಗಬೇಕಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಸಿದ್ಧವಾಗುತ್ತಿದೆ. ಈ ನೀತಿ ಅಂತಿಮಗೊಳಿಸುವ ವೇಳೆ ಪ್ರವಾಸಿ ತಾಣಗಳಲ್ಲಿ ನಿರ್ಮಿಸುವ ಹೋಟೆಲ್ ಮತ್ತಿತರೆ ಸೌಲಭ್ಯಗಳ ನಿರ್ಮಾಣಕ್ಕೆ ಆಗುವ ಹೆಚ್ಚುವರಿ ವೆಚ್ಚಗಳಿಗೆ ಪರಿಹಾರ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೈಸೂರಿನ ಬೃಂದಾವನ ಉದ್ಯಾನವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪುನರಾಭಿವೃದ್ಧಿಗೊಳಿಸುವ ಕುರಿತು ಬಜೆಟ್ ನಲ್ಲಿ ಘೋಷಿಸಲಾಗಿದ್ದು, ಸರಕಾರ ಕೂಡ ಇದರಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದೆ. ಅದೇ ರೀತಿ ಬೆಂಗಳೂರಿನಲ್ಲಿ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಪ್ರವಾಸೋದ್ಯಮ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಮತ್ತು ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಕರ್ನಾಟಕದ 320 ಕಿಲೋಮೀಟರ್ ಉದ್ದದ ಕರಾವಳಿ ಕಡಲ ತೀರದಲ್ಲಿರುವ 40 ತಾಣಗಳನ್ನು ಗುರುತಿಸಲಾಗಿದೆ. ಈ ತಾಣಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಆಸಕ್ತಿ ವ್ಯಕ್ತಪಡಿಸುವುದಕ್ಕೆ ಕರೆಯಲಾಗಿದೆ. ಆಸಕ್ತಿ ವ್ಯಕ್ತಪಡಿಸಬೇಕೆಂದು ಕೈಗಾರಿಕಾ ಪತಿಗಳನ್ನು ಸಚಿವ ಎಚ್ ಕೆ ಪಾಟೀಲ್ ಕೋರಿದರು. ಕರ್ನಾಟಕ ಪುರಾತತ್ವ ಕ್ಷೇತ್ರದಲ್ಲಿ ವಿಶೇಷ ಸ್ಥಾನದಲ್ಲಿದೆ. 25,000ಕ್ಕೂ ಹೆಚ್ಚು ಮಹತ್ವದ ಸ್ಮಾರಕಗಳು ಕರ್ನಾಟಕದಲ್ಲಿವೆ. ಆದರೆ ಈ ಎಲ್ಲಾ ಸ್ಥಾನಗಳ ಪೈಕಿ ಕೇವಲ 500 ತಾಣಗಳನ್ನು ಮಾತ್ರ ನಾವು ಸಂರಕ್ಷಿಸುತ್ತಿದ್ದೇವೆ. ಉಳಿದ ತಾಣಗಳ ಸಂರಕ್ಷಣೆಗೆ ಕಾಲಬದ್ದ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು ದತ್ತು ಸ್ಮಾರಕ ದತ್ತು ಯೋಜನೆ ಅಂತಹ ವಿಶೇಷ ಕಾರ್ಯಕ್ರಮಕ್ಕೆ ದಾನಿಗಳು ಸಹಕರಿಸಬೇಕೆಂದು ಎಚ್.ಕೆ ಪಾಟೀಲ್ ಸಹಕರಿಸಲು ಕೋರಿದರು.
ಕರ್ನಾಟಕ ಹಲವಾರು ಶ್ರದ್ಧಾ ಕೇಂದ್ರಗಳನ್ನು ಹೊಂದಿ ಅತಿ ಪವಿತ್ರವಾದ ರಾಜ್ಯಗಳಲ್ಲಿ ಕರ್ನಾಟಕ ಹಿರಿಯ ಸ್ಥಾನದಲ್ಲಿದೆ ಮಂಗಳೂರು ಉಡುಪಿ ಕಾರವಾರದಿಂದ ಹಿಡಿದು ಸವದತ್ತಿ ರೇಣುಕಾ ಯಲ್ಲಮ್ಮ, ಚಾಮುಂಡೇಶ್ವರಿ ಹುಲಿಗೆಮ್ಮ ಹೊಳಲಮ್ಮ ಬಾದಾಮಿ ಬನಶಂಕರಿ ಗಾಣಗಾಪುರ ದತ್ತಮಂದಿರ ಬೀದರ್ ಬಸವನಾಡು, ಕೂಡಲಸಂಗಮ ಸೇರಿದಂತೆ ಇಂತಹ ಪವಿತ್ರ ಸ್ಥಳಗಳಲ್ಲಿ ಕರ್ನಾಟಕ ಮೂಲಭೂತ ಸೌಲಭ್ಯ ಸೃಷ್ಟಿಸುವ ಪಿಪಿಪಿ ಮಾಡೆಲ್ ನಲ್ಲಿ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಣಯಿಸಿದೆ.
ಹಂಪಿ ಪಟ್ಟದಕಲ್ಲು ಬೇಲೂರು ಹಳೇಬೀಡು ಸೋಮನಾಥಪುರ ಪಶ್ಚಿಮ ಘಟ್ಟಗಳ ನೈಸರ್ಗಿಕ ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳೆಂದು ಯುನೆಸ್ಕೊದಿಂದ ಮಾನ್ಯತೆ ಪಡೆದಿವೆ. ಬೀದರನ ಕರೇಜ್ ಲಕ್ಕುಂಡಿ ಡೆಕ್ಕನ್ ಸಲ್ತನೇತಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಮಾಡಲು ಸೂಕ್ತ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ಅರಣ್ಯ ಗುಡ್ಡಗಾಡು ಹೊಳ್ಳಕೊಳ್ಳ ನೈಸರ್ಗಿಕ ಸಂಪತ್ತಿಗೆ ಹೆಸರಾದದ್ದು ಕರ್ನಾಟಕ ವನ್ಯಜೀವಿಗಳು ನೈಸರ್ಗಿಕ ರಮಣೀಯ ಸ್ಥಳಗಳ ಪ್ರದರ್ಶನ ವಿಶೇಷ ರೀತಿಯಲ್ಲಿ ಆಗಬೇಕಾಗಿದೆ ಅದಕ್ಕಾಗಿ ವಿಶೇಷ ಪ್ರಯತ್ನ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಸಾಹಸಿ ಪ್ರವಾಸೋದ್ಯಮ, ಶೈಕ್ಷಣಿಕ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ ದಿನ, ಸಂತೋಷದಿಂದ ಬೇಸರ ಕಳೆಯುವ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ ಪಾರಂಪರಿಕ ತಾಣಗಳ ಅಧ್ಯಯನ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ, ಎಫ್ ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ, ಉಪಾಧ್ಯಕ್ಷರಾದ ಬಾಲಕೃಷ್ಣ, ಉಮಾ ರೆಡ್ಡಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್, ದಕ್ಷಿಣ ಭಾರತ ಉತ್ಸವದ ಸಲಹೆಗರ ಶಿವಷಣ್ಮುಗಂ ಹಾಗೂ ಸೌಂದರ್ಯ ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತನ್ ಕುಮಾರ್ ಮಂಜಪ್ಪ ನಾನು ಮತ್ತಿತರು ಉಪಸ್ಥಿತರಿದ್ದರು.