ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಕರ್ನಾಟಕ ಕಿರುತೆರೆ ನಿರ್ಮಾಣ ನಿರ್ವಾಹಕರ ಸಂಘದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ
ಬೆಂಗಳೂರು: 'ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಕರ್ನಾಟಕವು ಇನ್ನೂ ಹಲವಾರು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆಯುವ ಶಕ್ತಿ ಕನ್ನಡ ಸಾಹಿತ್ಯಕ್ಕಿದೆ. ಇದು ಕನ್ನಡ ಹಾಗೂ ಕರ್ನಾಟಕದ ಶ್ರೀಮಂತಿಕೆ ಶ್ರೇಷ್ಠತೆಯನ್ನು ತೋರಿಸುತ್ತಿದೆ. ನಮ್ಮ ಕರ್ನಾಟಕ ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತವಾಗಿದೆ. ಆದ್ದರಿಂದ ನಾವು ನೀವೆಲ್ಲರೂ ನಮ್ಮ ನಾಡು ನುಡಿ ಮತ್ತು ಕಲೆ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳುಸುವ ಜವಾಬ್ದಾರಿಯು ನಮ್ಮೆಲ್ಲರದಾಗಿದೆ. ಹಾಗೆಯೇ ಕಿರುತೆರೆ ನಿರ್ಮಾಣ ನಿರ್ವಾಹಕರು ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ', ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡ ಹೇಳಿದರು.
ಕರ್ನಾಟಕ ಕಿರುತೆರೆ ನಿರ್ಮಾಣ ನಿರ್ವಾಹಕರ ಸಂಘದ ವತಿಯಿಂದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ಸ್ ಹಾಗೂ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ಸ್ ಸಹಕಾರದಲ್ಲಿ ಗುಬ್ಬಲಾಳ ಸಮೀಪದ ಮಹಾರಾಜ ಪ್ಯಾಲೇಸ್ ನಲ್ಲಿ ಸಂಘದ ಅಧ್ಯಕ್ಷರಾದ ಆರ್ ದೇವರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ನಂತರ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, 'ಕನ್ನಡ ಚಿತ್ರರಂಗವು ಕೋವಿಡ್ ಅಲೆಯಿಂದ ಆದ ಸಂಕಷ್ಟದಿಂದ ಹೊರ ಬರಬೇಕಾದರೆ ಸರ್ಕಾರವು ಚಿತ್ರರಂಗದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರಕ್ಕೆ ಈಗಾಗಲೇ ಚಿತ್ರರಂಗದ ಸಮಸ್ಯೆಯ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಿಯಾದರೂ ಅದನ್ನು ಪಡೆಯುವಂತಹ ಪರಿಸ್ಥಿತಿ ಇದೆ. ಹಾಗೆಯೇ ಕಿರುತೆರೆ ನಿರ್ಮಾಣ ನಿರ್ವಾಹಕರ ಸಮಸ್ಯೆಗಳಿಗೆ ಸಂದಸಲು ಮಂಡಳಿ ಸದಾ ಸಿದ್ಧವಿದೆ', ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ. ಮಾ ಹರೀಶ್, ಕಾರ್ಯದರ್ಶಿ ಸುಂದರ್ ರಾಜ್, ಬಿಬಿಎಂಪಿ ಮಾಜಿ ಮಹಾಪೌರರಾದ ಎಸ್ ಕೆ ನಟರಾಜ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ದೇಶಕರಾದ ಟಿ ಎನ್ ಸೀತಾರಾಂ, ರವಿಕಿರಣ್, ರವಿ ಆರ್ ಗರಣಿ, ಸಂಜೀವ್ ತಗಡೂರು, ಸುನಿಲ್ ಪುರಾಣಿಕ್, ರಾಮ್ ಜಿ, ಗಾಯಕ ಶಶಿಧರ್ ಕೋಟೆ,
ಕಲಾವಿದರಾದ ಗಿರಿಜಾ ಲೋಕೇಶ್, ನವೀನ್ ಕೃಷ್ಣ, ಅಶ್ವಿನಿಗೌಡ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ರಾಜ್ಯೋತ್ಸವದ ಪ್ರಯುಕ್ತ ಹಲವು ಮನರಂಜನಾ ಕಾರ್ಯಕ್ರಮಗಳು ಜರುಗಿದವು.